ಪಂಚಾಚಾರ್ಯರು -
	ವೀರಶೈವ ಮತಗ್ರಂಥಗಳಲ್ಲಿ ರೇವಣಸಿದ್ಧ, ಮರುಳ ಸಿದ್ಧ, ಏಕೋರಾಮ, ವಿಶ್ವಾರಾಧ್ಯ ಮತ್ತು ಪಂಡಿತಾರಾಧ್ಯ ಎಂಬ ಐದು ಮಂದಿ ಶಿವಾಚಾರ್ಯರ ಹೆಸರುಗಳನ್ನು ಬಹಳವಾಗಿ ಹೇಳಿದೆ. ಇವರು ವೀರಶೈವ ಮತಾಚಾರ್ಯರು ಎಂದು ಕೂಡ ಕೆಲವು ಗ್ರಂಥಕಾರರು ಹೇಳಿದ್ದಾರೆ. ಈ ವಿಚಾರ ಶಿವಾಗಮಗಳಲ್ಲಿ ಮೊಟ್ಟಮೊದಲು ಉಕ್ತವಾಗಿದೆ. ಇವರು ಪರಶಿವನ ಸದ್ಯೋಜಾತ, ಅಘೋರ, ವಾಮದೇವ, ಈಶಾನ್ಯ, ತತ್ಪುರುಷ ಎಂಬ ಪಂಚಮುಖಗಳಲ್ಲಿ ಜನಿಸಿದರೆಂದೂ ಅನಂತರ ಕೊಲ್ಲಿಪಾಕಿ, ಶ್ರೀಶೈಲ, ಉಜ್ಜಯಿನಿ, ಕಾಶಿ ಮತ್ತು ಕೇದಾರ ಲಿಂಗಗಳಲ್ಲಿ ಅವತರಿಸಿದರೆಂದೂ ಇವರು ಅಯೋನಿಜರೆಂದೂ ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಎಂಬ ಪಂಚಗೋತ್ರಗಳ ಅಧಿಪತಿಗಳೆಂದೂ ವೀರಶೈವ ಮತಾಚಾರ್ಯರೆಂದೂ ಸ್ವಯಂಭು ಮೊದಲಾದ ಅಗಮಗಳಲ್ಲಿ ಹೇಳಿದೆ. ವೀರಶೈವ ಪುರಾಣಾದಿಗಳು ಈ ವಿಷಯಗಳನ್ನು ಎತ್ತಿ ಹೇಳಿವೆ. ಮೇಲಿನ ಈ ಐವರು ಆಚಾರ್ಯರ ಹೆಸರಿನಲ್ಲಿ ಕ್ರಮವಾಗಿ ಬಾಳೇಹಳ್ಳಿ (ಚಿಕ್ಕಮಗಳೂರು ಜಿಲ್ಲೆ), ಉಜ್ಜಯಿನಿ (ಬಳ್ಳಾರಿ), ಶ್ರೀಶೈಲ (ಕರ್ನೂಲು ಜಿಲ್ಲೆ), ಕಾಶೀಕ್ಷೇತ್ರ ಮತ್ತು ಕೇದಾರ (ಉತ್ತರ ಪ್ರದೇಶ) - ಈ ಐದು ಕ್ಷೇತ್ರಗಳಲ್ಲಿ ಈ ಆಚಾರ್ಯಪಂಚಕದ ಮಠಪೀಠಗಳು ಪ್ರಸಿದ್ಧವಾಗಿವೆ. ಈ ಐವರ ವಿವರಗಳು ಆಯಾ ಶೀರ್ಷಿಕೆಯಲ್ಲಿವೆ.

	ಷಡಕ್ಷರಿ ತನ್ನ ವೃಷಭೇಂದ್ರ ವಿಜಯದಲ್ಲಿ ಪೂರ್ವಾಚಾರ್ಯರನ್ನು ಸ್ಮರಿಸುವಾಗ `ಶ್ರೀಗಳಾಚತುರಾಚಾರ್ಯ ಪದಾಂಬುಜಂಗಳೆಮಗೀಗಾಮೋದ ಸಂದೋಹಮಂ ಎಂದೂ ರಾಜಶೇಖರ ವಿಳಾಸದಲ್ಲಿ `ರೇಣುಕ ರಾಮ ಪಂಡಿತ ಮಹಾ ಮರುಳಾರ್ಯರ ಮಾಣದೆ ಬಣ್ಣಿಸುತ್ತೆ¾ಗಿಮೇಣ್ಪಡೆವೆಂ ಪರಮಾರ್ಥ ಸಿದ್ಧಿಯಂ ಎಂದೂ ಹೇಳಿದ್ದಾನೆ. ಗೂಳೂರಿನಲ್ಲಿ ವಾಸವಾಗಿದ್ದ ಸಂಪಾದನೆಯ ಪರ್ವತೇಶ (1698) ಚತುರಾಚಾರ್ಯ ಪುರಾಣ ಒಂದನ್ನು ಬರೆದಿದ್ದಾನೆ. ಇದರಲ್ಲಿ ರೇವಣಸಿದ್ಧ, ಮರುಳಸಿದ್ಧ, ಏಕೋರಾಮ, ಪಂಡಿತಾರಾಧ್ಯ ಎಂಬ ಈ ನಾಲ್ವರು ಆಚಾರ್ಯರ ಚರಿತ್ರೆಯನ್ನು ಮುಖ್ಯವಾಗಿ ಹೇಳಿ, ಕಡೆಯಲ್ಲಿ ವಿಶ್ವೇಶ್ವರಾಚಾರ್ಯರನ್ನು ಸೇರಿಸಿ, ಪಂಚಕಲಶದ ಆಚಾರ್ಯಚರಿತ ಎಂದಿದ್ದಾನೆ. ಈ ವಿಷಯಗಳನ್ನು ನೋಡಿದರೆ ಮೊದಲಿಗೆ ನಾಲ್ಕೇ ಜನ ಆಚಾರ್ಯರಿದ್ದು ಆ ಪಟ್ಟಿಗೆ ಅನಂತರ ವಿಶ್ವಾರಾಧ್ಯ ಸೇರಿ ಆಚಾರ್ಯರ ಸಂಖ್ಯೆ ಐದು ಆಗಿರಬೇಕೆಂದು ತೋರುತ್ತದೆ.

	ಕಾಶಿಯಲ್ಲಿರುವ ಜಂಗಮವಾಡಿ ಮಠ ವಿಶ್ವಾರಾಧ್ಯನ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಮಠಕ್ಕೆ ಕಾಶಿಯ ಹಾಗೂ ಮೈಸೂರು ಮಹಾರಾಜರು ಬರೆಸಿಕೊಟ್ಟ ಶಾಸನಗಳಿವೆ. ಜಹಾಂಗೀರ್, ಔರಂಗಜೇಬ್, ಷಹಜಹಾನ್ ಮೊದಲಾದವರು ಕೊಟ್ಟ ಶಾಸನಗಳಿವೆ. ಕೆಳದಿ ರಾಜ ದೊಡ್ಡ ಸಂಕಣ್ಣ ನಾಯಕ ಈ ಮಠಕ್ಕೆ ಹೆಚ್ಚು ಸೇವೆ ಸಲ್ಲಿಸಿದ್ದಾನೆ. ಪ್ರಯಾಗದ ತ್ರಿವೇಣಿ ಸಂಗಮದ ಹತ್ತಿರ ಈ ಮಠದ ಶಾಖೆ ಇದೆ. ವೀರಶೈವರಲ್ಲಿ ನಡೆಯುವ ಶಿವದೀಕ್ಷಾ ಕರ್ಮಗಳು ಈ ಐವರು ಆಚಾರ್ಯರ ಹೆಸರಿನ ಪಂಚಕಳಸದ ಸನ್ನಿಧಿಯಲ್ಲಿ ನಡೆಯುತ್ತವೆ.											   (ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ